ಶಿಶುಭಾಷೆ
	ಮಕ್ಕಳ ಕಲಿಕೆಯ ಹಂತದ ಭಾಷೆ(ಚೈಲ್ಡ್ ಲಾಂಗ್ವೇಜ್). ಮಾನವನ ಜೀವನದಲ್ಲಿ ಭಾಷೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಮನಸ್ಸಿನಲ್ಲಿರುವ ವಿಚಾರಗಳನ್ನು ಇತರರಿಗೆ ಆದಷ್ಟು ಖಚಿತವಾಗಿ ತಿಳಿಸುವುದೇ ಭಾಷೆಯ ಪ್ರಮುಖ ಲಕ್ಷಣ. ಯಾವುದೇ ಒಂದು ಭಾಷೆಯನ್ನು ಮಗು ಹೇಗೆ ಕಲಿತುಕೊಳ್ಳುತ್ತದೆ, ವಯಸ್ಸಿನ ಯಾವ ಹಂತದಲ್ಲಿ ಅಕ್ಷರಗಳನ್ನು ಪದಗಳನ್ನು ಉಚ್ಚರಿಸುತ್ತದೆ, ಯಾವ ಯಾವ ವಯಸ್ಸಿನಲ್ಲಿ ಎಷ್ಟೆಷ್ಟು ಪದಗಳನ್ನು ಉಚ್ಚರಿಸಬಲ್ಲದು ಹಾಗೂ ಶಿಶುಭಾಷೆಯ ಸ್ವರೂಪ ಮತ್ತು ವ್ಯಾಪ್ತಿಯೇನು ಮೊದಲಾದ ವಿಚಾರಗಳ ಬಗ್ಗೆ ಪಾಶ್ಚಾತ್ಯ ಮತ್ತು ಪೌರ್ವಾತ್ಯ ರಾಷ್ಟ್ರಗಳಲ್ಲಿ ವೈಜ್ಞಾನಿಕ ಅಧ್ಯಯನ ನಡೆಯುತ್ತಿದೆ. ಭಾಷಾವಿಜ್ಞಾನಿಗಳು, ಮನೋವಿಜ್ಞಾನಿಗಳು ಮತ್ತು ಕಿವಿ, ಮೂಗು, ಗಂಟಲು ವೈದ್ಯರು ಶಿಶುಭಾಷೆಯ ಕಡೆಗೆ ತೀವ್ರ ಗಮನ ಹರಿಸಿದ್ದಾರೆ.

	ಮಗು ಹೊರಡಿಸುವ ಗಂಟಲಿನ ಶಬ್ದಗಳಿಂದ, ಗುಳುಗುಳು ಶಬ್ದಗಳಿಂದ, ಮೆಲುವಾದ ಕೂಜಿತ ಧ್ವನಿಗಳಿಂದ ಮತ್ತು ಒಳಗೊಳಗೇ ನಗುವುದರಿಂದ ತನ್ನಷ್ಟಕ್ಕೆ ತಾನೇ ವಿನೋದಪಡುತ್ತದೆ. ಈ ಸಹಜ ಕ್ರಿಯೆಗಳು, ಮಗು ಮಾತನಾಡಲು ಕಲಿಯುತ್ತಿರುವ ಬಗೆಗೆ ದೊರೆಯುವ ಮಾಹಿತಿಗಳೆನ್ನಬಹುದು.

	ಶಿಶುಭಾಷೆ ಎಂದರೆ ಏನು ಎಂದು ಹೇಳಲು ಅನೇಕ ವಿದ್ವಾಂಸರು ಪ್ರಯತ್ನಪಟ್ಟಿದ್ದಾರೆ. ಆದರೆ ಯಾರಿಗೂ ಇದರ ಸಂಪೂರ್ಣ ಸ್ವರೂಪವನ್ನು ಸೂತ್ರರೂಪದಲ್ಲಿ ಹಿಡಿದಿಡಲು ಸಾಧ್ಯವಾಗಿಲ್ಲ. ಶಿಶುನುಡಿಯನ್ನು ಒಂದು ರೀತಿಯ ಪಿಡ್ಜಿನ್/ಪಿಜನ್ (ಮಿಶ್ರಭಾಷೆ) ಎನ್ನಬಹುದು ಎಂದು ಜೇಕಬ್‍ಸನ್ ಹೇಳುತ್ತಾನೆ. ಚಿಕ್ಕಮಕ್ಕಳೊಡನೆ ಮಾತನಾಡಲು ಬಳಸುವ ಭಾಷೆಯ ಒಂದು ವಿಶಿಷ್ಟರೂಪವೇ ಶಿಶುಭಾಷೆ ಎಂದು ಫಗ್ರ್ಯುಸನ್ ಹೇಳುತ್ತಾನೆ.

	ಮನೋಭಾಷಾವಿಜ್ಞಾನಿಗಳು (ಸೈಕೋಲಿಂಗ್ವಿಸ್ಟ್ಸ್) ಶಿಶುಭಾಷೆಯ ಬೆಳೆವಣಿಗೆಗೆ ಸಂಬಂಧಿಸಿದಂತೆ ಮೂರು ಹಂತಗಳನ್ನು ಪರಿಶೀಲಿಸಿದ್ದಾರೆ. 

	ಪ್ರಾರಂಭದ ಅಸ್ಪಷ್ಟಸದ್ದುಗಳು: ಮಗುವಿನ ವಾಕ್‍ಶಕ್ತಿಯ ಮೂಲ ಜನನರೋದನವೆಂದು ಮನೋಭಾಷಾವಿಜ್ಞಾನಿಗಳ ಅಭಿಮತ. ಮಗು ಜನಿಸಿದ ಕೂಡಲೇ ಗಾಳಿ ಶ್ವಾಸಕೋಶಕ್ಕೆ ಪ್ರವೇಶಿಸುವಾಗಲೇ, ಪ್ರತಿಕ್ರಿಯೆಯೇ ಕಾರಣವಾಗಿ ಅಳುವಂತೆ ಶಬ್ದೋತ್ಪತ್ತಿಯಾಗುವುದು. ಮಗು ಕೆಮ್ಮುವಾಗಲೂ ಸೀನುವಾಗಲೂ ಪ್ರತಿಕ್ರಿಯೆಯೇ ಕಾರಣವಾಗಿ ಶಬ್ದದ ಉತ್ಪತ್ತಿಯಾಗುವುದು. ಮಗುವಿಗೆ ಒಂದು ತಿಂಗಳಾಗುವ ಹೊತ್ತಿಗೆ ಅದರ ಅಳುವಿನಲ್ಲಿ ವೈವಿಧ್ಯವಿರುತ್ತದೆ. ಅಳು ಪ್ರತಿಕ್ರಿಯೆಯ ಒಂದಂಶ. ಮೊದಲ ಮೂರು ತಿಂಗಳಲ್ಲಿ ಮಗು ಕಿರುಚುವುದು, ಕೂಗುವುದು ಮುಂತಾದ ಸದ್ದುಗಳನ್ನು ಮಾಡುವುದು. ಮಗುವಿಗೆ ಹಸಿವಾದಾಗ ಊ ಆ ಎಂದೂ ನೋವುಂಟಾದಾಗ ಆ ಈ ಎಂದೂ ಕೂಗುವುದೆಂದು ಬೀನ್ ಹೇಳಿದ್ದಾನೆ.

	ಮಗು ಭಾಷೆಯನ್ನು ಕಲಿಯುವ ಪರಿಯನ್ನು ಪರಿಶೀಲಿಸಿದರೆ ಅದು ಅನುಕರಣೆಯಿಂದ, ನಿರಂತರ ಪ್ರಯತ್ನದಿಂದ ಶಬ್ದಗಳನ್ನು ಕಲಿಯುತ್ತದೆ ಎಂಬ ಅಂಶ ಮನದಟ್ಟಾಗುತ್ತದೆ. ಮಗುವಿಗೆ ಮೂರನೆಯ ಅಥವಾ ನಾಲ್ಕನೆಯ ತಿಂಗಳಿನಿಂದ ಮಾತಿಗೆ ಅವಶ್ಯವಾದ ಧ್ವನ್ಯಂಗಗಳ ಸಹಾಯದಿಂದ ಕೆಲವು ಸದ್ದುಗಳು ಉತ್ಪತ್ತಿಯಾಗುವುವು. ಈ ಸದ್ದುಗಳಲ್ಲಿ ಕೆಲವು ಸ್ವರಗಳನ್ನೂ ವ್ಯಂಜನಗಳನ್ನೂ ಗುರುತಿಸಬಹುದು. ಮಗು ಮೊದಮೊದಲಲ್ಲಿ ತುಟಿಗಳಿಗೆ ಸಂಬಂಧಪಟ್ಟ ಪ್,ಬ್ (ಓಷ್ಠ್ಯ ವ್ಯಂಜನ ಗಳು) ಧ್ವನಿಗಳನ್ನು ಅನುನಾಸಿಕ ಮ್ ಧ್ವನಿಯನ್ನು ಉಚ್ಚರಿಸುತ್ತದೆ. ಮಗು ಬೆಳೆದಂತೆಲ್ಲ ತ್ ದ್ (ದಂತ್ಯ ವ್ಯಂಜನಗಳು), ನ್ (ಅನುನಾಸಿಕ) ಮುಂತಾದ ಧ್ವನಿಗಳನ್ನು ಉಚ್ಚರಿಸಲು ಶಕ್ತವಾಗುತ್ತದೆ. ದಿನಕಳೆದಂತೆ ಈ ಧ್ವನಿಗಳ ಜೋಡಣೆಯನ್ನು ಗುರುತಿಸಬಹುದು. ಈ ಸಮಯದಲ್ಲಿ ಮಗು ಉಚ್ಚರಿಸುವ ಸ್ವರಧ್ವನಿಗಳು ಸಾಮಾನ್ಯವಾಗಿ ಹ್ರಸ್ವವಾಗಿರುತ್ತವೆ.

	ಪದ: ಸುಮಾರು ಆರುತಿಂಗಳ ಮಗು ಮಾಡುವ ಶಬ್ದಗಳನ್ನು ಪರಿಶೀಲಿಸಿ, ಈ ಅವಧಿಯಲ್ಲಿ ಮಗು ದಿನವೊಂದಕ್ಕೆ ನೂರನಲವತ್ನಾಲ್ಕು ಸಲ ಶಬ್ದಗಳನ್ನು ಮಾಡುವುದೆಂದು ಗೆಸೆಲ್ ಹೇಳಿದ್ದಾನೆ. ಈ ವಿಧವಾದ ಶಬ್ದಗಳು ಶಿಶುಭಾಷೆಯ ಬೆಳೆವಣಿಗೆಗೆ ತಳಹದಿ. ಒಂಬತ್ತನೆಯ ತಿಂಗಳಿನಿಂದ ಮಗು, ಮತ್ತೊಬ್ಬರ ಮಾತನ್ನು ಆಲಿಸಿ, ಅದರಂತೆಯೇ ಅನುಕರಣೆ ಮಾಡಲು ತೊಡಗುವುದು. ದಿನಕಳೆದಂತೆ ನಿರ್ದಿಷ್ಟ ಶಬ್ದವನ್ನೂ ಪದವನ್ನೂ ಕೆಲಮಟ್ಟಿಗೆ ಉಚ್ಚರಿಸಲು ಶಕ್ತವಾಗುತ್ತದೆ. ಈ ಅವಧಿಯಲ್ಲಿ ಮಗು, ತನ್ನ ಇಂಗಿತವನ್ನು ಮತ್ತೊಬ್ಬರಿಗೆ ತಿಳಿಸಲು ಯತ್ನಿಸುತ್ತದೆ. ಹತ್ತು ಮತ್ತು ಹನ್ನೊಂದನೆಯ ತಿಂಗಳಿನ ಮಗು ಪ್ರಶ್ನಾರ್ಥಕ ಮತ್ತು ಆಶ್ಚರ್ಯಸೂಚಕ ಧ್ವನಿಗಳನ್ನು ಉಚ್ಚರಿಸುವುದು ಎಂಬ ಅಂಶವನ್ನು ಪೆರ್ಲಿ ಶೋಧಿಸಿದ್ದಾನೆ. ಸೇಕಡ 74ರಷ್ಟು ಮಕ್ಕಳು ಒಂದು ವರ್ಷ ಕಳೆಯುವಷ್ಟರಲ್ಲಿ ಪದಗಳನ್ನು ಸಮರ್ಥವಾಗಿ ಬಳಸುತ್ತವೆ ಎಂದು ಬೇಟ್‍ಮನ್ ಹೇಳಿದ್ದಾನೆ. ಹನ್ನೆರಡನೆಯ ತಿಂಗಳಿನಲ್ಲಿ ಮಗುವಿಗೆ ಪದಾರ್ಥಗಳ ಹೆಸರು, ಬೇಕು ಬೇಡ ಎನ್ನುವ ಪದಗಳು ಅರ್ಥವಾಗುವುವು. ಹದಿಮೂರನೆಯ ತಿಂಗಳಿನಲ್ಲಿ ಮಗು, ಎರಡು ಪದಗಳನ್ನು ನುಡಿದರೆ, ಒಂದೂವರೆ ವರ್ಷವಾದಾಗ ಸುಮಾರು ಹನ್ನೆರಡರಿಂದ ಹದಿನೈದು ಪದಗಳನ್ನು ನುಡಿಯುತ್ತದೆ. ಒಂದೂವರೆವರ್ಷದ ತರುವಾಯ ಹಾಲುಕುಡಿ, ಹಣ್ಣುತಿನ್ನು ಮುಂತಾದ ಪದಗಳನ್ನು, ಚಿಕ್ಕ ಚಿಕ್ಕ ವಾಕ್ಯಗಳನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಹಾಗೆ ವರ್ತಿಸುತ್ತದೆ. ಎರಡು ವರ್ಷದ ಮಗು ಪದವನ್ನು ವಾಕ್ಯದಂತೆ ಬಳಸುತ್ತದೆ. ಬುವ್ವಎಂದರೆ ನನಗೆ ಊಟ ಬೇಕು ಎಂದು ಜಿಜ್ಜಿ ಎಂದರೆ ನನಗೆ ನೀರುಬೇಕು ಎಂದು ಆಯಿ ಎಂದರೆ ಗಾಯವಾಗಿದೆ ಎಂದು ಹಿರಿಯರು ಅರ್ಥಮಾಡಿಕೊಳ್ಳಬೇಕು. ಈ ವಯಸ್ಸಿನ ಮಗುವಿನಲ್ಲಿ ಕ್ರಿಯಾಪದಕ್ಕಿಂತಲೂ ನಾಮಪದಗಳ ಪ್ರಮಾಣವೇ ಹೆಚ್ಚು.

	ವಾಕ್ಯ: ಮೂರು ವರ್ಷದ ಮಗು ಪದ ಸಮುಚ್ಚಯ ಮತ್ತು ಚಿಕ್ಕಚಿಕ್ಕ ವಾಕ್ಯಗಳನ್ನು ನುಡಿಯಲು ಕಲಿತಿರುತ್ತದೆ. ಅಲ್ಲದೆ ಬಳಕೆಯಲ್ಲಿರುವ ವಿವಿಧ ವಸ್ತುಗಳ ಹೆಸರುಗಳನ್ನು ಚಿತ್ರಗಳಲ್ಲಿರುವ ವಸ್ತು ವಿಶೇಷಗಳನ್ನೂ ಹೇಳಲು ಶಕ್ತವಾಗಿರುತ್ತದೆ. ಈ ವಯಸ್ಸಿನಿಂದ ಮಗು, ದೊಡ್ಡವರಿಗೆ ಪ್ರಶ್ನೆಗಳ ಸುರಿಮಳೆ ಹಾಕುವುದನ್ನು ಗಮನಿಸಬಹುದು. ಒಂದು ಸಣ್ಣಘಟನೆಯನ್ನಾಗಲೀ ಅಥವಾ ಒಂದು ಸರಳ ಕಥೆಯನ್ನಾಗಲೀ ಗ್ರಹಿಸಲು ಅದಕ್ಕೆ ಸಾಧ್ಯವಿರುತ್ತದೆ. ನಾಲ್ಕನೆಯ ವರ್ಷದ ಹೊತ್ತಿಗೆ ಹಸಿವು, ನಿದ್ದೆ, ಬಿಸಿ, ಚಳಿ ಮುಂತಾದ ಪದಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತದೆ. ಐದನೆಯ ವರ್ಷದಲ್ಲಿ ವ್ಯಾಕರಣಬದ್ಧವಾಗಿ ತಪ್ಪಿಲ್ಲದಂತೆ ಮಾತನಾಡುತ್ತದೆ.

	ಶಿಶುಭಾಷೆ ಬಹುಮಟ್ಟಿಗೆ ಸುತ್ತುಮುತ್ತಲಿನ ಸನ್ನಿವೇಶಗಳನ್ನು ಅವಲಂಬಿಸುತ್ತದೆ. ತನ್ನ ಮೊದಲ ದಿನಗಳಲ್ಲಿ ಮಗು, ದೊಡ್ಡವರ ಮುಖಭಾವ ಮತ್ತು ಅವರ ಉಚ್ಚಾರಣಾ ರೀತಿಯಿಂದ ಅರ್ಥವನ್ನು ಗ್ರಹಿಸುತ್ತದೆ. ದಿನಕಳೆದಂತೆ ಸಮಯ, ಸಂದರ್ಭಗಳಿಗೆ ತಕ್ಕಂತೆ ಪದಗಳ ಅರ್ಥವನ್ನು ತಿಳಿಯಲು ಪ್ರಯತ್ನಿಸುತ್ತದೆ. 

	ಮಕ್ಕಳು ಪದಗಳನ್ನು ಕಲಿಯುವುದು ಕೇಳಿ-ಹೇಳಿ ಪ್ರಯತ್ನದಿಂದ. ಯಾವುದಾದರೊಂದು ಪದಾರ್ಥವನ್ನು ಮಗು ನೋಡಿದಾಗ, ಅದೇ ಸಮಯದಲ್ಲಿ ಒಂದು ಶಬ್ದವನ್ನು ಕೇಳಿದರೆ, ಆ ಪದಾರ್ಥವನ್ನು ನೋಡುತ್ತಾ ಆ ಪದವನ್ನೇ ಉಚ್ಚರಿಸಲು ಪ್ರಯತ್ನಿಸುತ್ತದೆ. ಕ್ರಮೇಣ ಆ ಪದಾರ್ಥವನ್ನು ನೋಡಿದಾಗ, ತಕ್ಷಣವೇ ತಾನೇ ಅದರ ಹೆಸರನ್ನು ಹೇಳುವುದು. ಹೀಗೆ ಕೇಳಿ-ಹೇಳುವುದರ ಮೂಲಕ ಕಲಿಯುತ್ತ ಹೋಗುತ್ತದೆ.

	ಕಣ್ಣು ಕಿವಿ ಮತ್ತು ಧ್ವನ್ಯಂಗಗಳ ಪೂರ್ಣಬೆಳೆವಣಿಗೆ ಮತ್ತು ಅವಯವಗಳನ್ನು ಇನ್ನೊಂದರ ಜೊತೆ ಸಹಕರಿಸುವಂತೆ ಮಾಡುವ ನರಮಂಡಲದ ಬೆಳೆವಣಿಗೆ ನಡೆದಿದ್ದರೆ ಮಾತ್ರವೇ ಭಾಷೆಯನ್ನು ಕಲಿಯಲು ಶಿಶು ಶಕ್ತವಾಗುವುದು ಎಂದು ಸ್ಟ್ರೇಯರ್ ತನ್ನ ಸಂಶೋಧನೆಗಳಿಂದ ಸಾಬೀತುಪಡಿಸಿದ್ದಾನೆ.

	ಕಳೆದ ಮೂರು ದಶಕಗಳಲ್ಲಿ ಶಿಶುಭಾಷೆಯನ್ನು ಕುರಿತ ಅಧ್ಯಯನ ಎರಡು ರೀತಿಯಲ್ಲಿ ನಡೆದಿದೆ:

ಮಗುವಿನೊಡನೆ ಸಂಭಾಷಿಸಲು ತಾಯಿ ಬಳಸುವ ಭಾಷಾರೂಪ-ಮಗುವಿಗೆ ಸ್ನಾನ ಮಾಡಿಸುವಾಗ, ಉಣಿಸುವಾಗ, ಮಲಗಿಸುವಾಗ, ಹೊರಗೆ ಅಥವಾ ಶೌಚಕ್ಕೆ ಕರೆದೊಯ್ಯುವಾಗ ತಾಯಿ, ಮಗುವಿಗಾಗಿ ಬಳಸುವ ಶಬ್ದಗಳನ್ನೂ ಪದಗಳನ್ನೂ ಸಂಗ್ರಹಿಸಿ ಅಭ್ಯಸಿಸಲಾಗಿದೆ.

	ಪ್ರಾಸಗಳು: ಅರ್ಥಗೌಣವಾದ ಮತ್ತು ಶಬ್ದ ಪ್ರಧಾನವಾದ ಪದಸಮೂ ಹಗಳು. ಇವುಗಳಲ್ಲಿ ಪ್ರಾಸವನ್ನು ಗುರುತಿಸಬಹುದು. ಬೆಳೆಯುತ್ತಿರುವ ಶಿಶುಗಳ ಭಾವಕ್ಕನುಗುಣವಾಗಿ ಅರ್ಥಕ್ಕಿಂತ ಶಬ್ದಕ್ಕೇ ಹೆಚ್ಚು ಪ್ರಾಶಸ್ತ್ಯವಿರುವ ಅಂಶ ಕಂಡುಬರುತ್ತದೆ. ಇಂಥ ಅನೇಕ ಶಿಶುಪ್ರಾಸಗಳನ್ನು ಸಂಗ್ರಹಿಸಿ ಅವುಗಳ ಭಾಷಾರಚನೆಯನ್ನು ಪರಿಶೀಲಿಸಲಾಗಿದೆ.

	ಕುತೂಹಲಕ್ಕೆ ಅಥವಾ ಜ್ಞಾನದಾಹಕ್ಕೆ ಒಳಗಾದ ಮಗು ಹಾಕುವ ಪ್ರಶ್ನೆಗಳಿಂದ ದೊಡ್ಡವರು ಕೆಲವೊಮ್ಮೆ, ತಬ್ಬಿಬ್ಬಾಗುವುದು ಸಹಜ. ಮಗುವಿನ ಹಲವಾರು ಪ್ರಶ್ನೆಗಳಿಗೆ ದೊಡ್ಡವರು ಉತ್ತರಿಸಲು ಅನೇಕ ವೇಳೆ ಸಾಧ್ಯವಾಗದು. ಮಕ್ಕಳ ಪ್ರಶ್ನೆಗಳನ್ನು, ಮಾತುಗಳನ್ನು ಕುರಿತು ಆಲೋಚಿಸಿದಾಗ, ಅವರ ಮನಸ್ಸಿನ ವಿವಿಧ ಹಂತಗಳನ್ನು ಅರಿಯಬಹುದು. 

	ಶಿಶುಭಾಷೆಯ ಸ್ವರೂಪ, ವ್ಯಾಪ್ತಿ ಮತ್ತು ಸಂಕೀರ್ಣತೆಗಳನ್ನು ಕುರಿತು ಈವರೆಗೆ ನಡೆದಿರುವ ವೈಜ್ಞಾನಿಕ ಅಧ್ಯಯನಗಳನ್ನು ಗಮನಿಸಿದಾಗ, ಮುಂದಿನ ದಿನಗಳಲ್ಲಿ ಶಿಶುಭಾಷಾವಿಜ್ಞಾನ ಅಥವಾ ಬಾಲಭಾಷಾ ವಿಜ್ಞಾನವೆಂಬ ಪ್ರತ್ಯೇಕ ಅಧ್ಯಯನವೇ ರೂಪು ತಳೆಯಬಹುದೆನಿಸುತ್ತದೆ.	
								
	(ಆರ್.ಎಮ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ